About Us   |   How It Works   |   Disclaimer

Sidlingu: Director’s Take

ಮಾತು ಮುಗಿಸುವ ಮುನ್ನ,

ನನ್ನ ಬದುಕಿನ ಹಸಿವು, ಅವಮಾನ, ಹತಾಶೆ, ಹೋರಾಟ, ಸಾಲ, ದ್ರೋಹ, ಸಿಟ್ಟು, ರೋಷ, ಗುರಿ ಮತ್ತು ಕನಸುಗಳ ಪ್ರತೀಕವೇ ’ ಸಿದ್ಲಿಂಗು’….! ಒಂದು ಹಿಡಿ ಪ್ರೀತಿಗಾಗಿ ಬದುಕಿನಲ್ಲಿ ಅಲೆಯುತ್ತಿದ್ದಾಗ ನನಗೇ ಗೊತ್ತಿಲ್ಲದ ಹಾಗೇ ನನ್ನಲ್ಲಿ ’ ಸಿದ್ಲಿಂಗು’ ಹುಟ್ಟಿಕೊಂಡ. ಈಗ ಅವನಿಗೆ ದ್ರಶ್ಯ ರೂಪ ಕೊಟ್ಟಿದ್ದೇನೆ. ಕಾರಣ ಇಷ್ಟೇ, ’ಸಿದ್ಲಿಂಗು’ವಿನಿಂದ ನನಗೆ ಬಿಡುಗಡೆ ಬೇಕಿತ್ತು…! ಹೌದು, ಅಷ್ಟರ ಮಟ್ಟಿಗೆ ನನ್ನನ್ನ ’ಸಿದ್ಲಿಂಗು’ ಕಾಡುತ್ತಿದ್ದ. ಮೂಲ ’ಸಿದ್ಲಿಂಗು’ ನಾನೇ ಆಗಿದ್ದರಿಂದ ಈ ಬಂಧನ ಸಹಜ. ಈಗ ಒಂದಷ್ಟು ಹಗುರಗೊಂಡಿದ್ದೇನೆ. 

ನನಗೆ ಬದುಕು ತಿಳಿದ ಕ್ಷಣದಿಂದಲೂ ಭರವಸೆಯಲ್ಲೇ ಬದುಕಿದವನು. ಈಗಲೂ ಅಷ್ಟೇ, ಮುಂದೆಯೂ ಕೂಡ. ಯಾಕಂದರೇ ಭರವಸೆಯ ಬೆಳಕು ಎಂದೂ ಆರದು….! ಸುಮಾರು ಹತ್ತೋಂಭತ್ತು ವರ್ಷಗಳ ಹಿಂದೆ ನನ್ನ ತಂದೆ ಸಾವಿನ ಕೈ ಸೇರಿದಾಗಲೂ, ಏಕಾಏಕಿ ಬಡತನದಲ್ಲಿ ಬಿದ್ದಾಗಲೂ, ಶುಗರ್ ಇದ್ದ ನನ್ನ ತಾಯಿಗೆ ಒಂದು ಇಡೀ ದಿನ ಮಾತ್ರೆ ತಂದು ಕೊಡಲು ಸೋತಾಗಲು, ನಾನು ಭರವಸೆಯಲ್ಲೇ ಬದುಕಿದವನು. ಈ ಭರವಸೆಯೇ ನನ್ನನು ಬೆಳಕಿನತ್ತ ಕರೆದುಕೊಂಡು ನಡೆಯಿತು. ಇದು ಎಷ್ಟರ ಮಟ್ಟಿಗೆ ನನ್ನಲ್ಲಿ ತುಂಬಿದೆ ಅಂದರೆ, ನನ್ನ ಪ್ರಥಮ ರಾತ್ರಿ ಸಮಯದಲ್ಲಿ ಹಾಸಿಗೆ ಇಲ್ಲಾದಾಗಲೂ ಮುಂದೊಂದು ದಿನ ಸುಪ್ಪತ್ತಿಗೇಯೇ ಸಿಗುತ್ತದೆ ಎಂಬ ಭರವಸೆಯಲ್ಲೇ ಕೇವಲ ಚಾಪೆಯಲ್ಲೇ ಅತ್ಯಂತ ಸೊಗಸಾಗಿ ಅನುಭವಿಸಿದವನು…..!

ಹೀಗಾಗಿ ಈ ಭರವಸೆಯೇ ಇವತ್ತು ನನ್ನನ್ನ ’ಸಿದ್ಲಿಂಗು’ ಜೊತೆಗೆ ತಂದು ನಿಲ್ಲಿಸಿದೆ. ಇಲ್ಲಿ ಒಂದು ಪ್ರೆಶ್ನೆ ಸಹಜ. ಏನೇಂದರೇ, ಇಂಥ ಭರವಸೆಯ ಪ್ರವ್ರತ್ತಿ ಇರುವ ನಿರ್ದೇಶಕ ’ಸಿದ್ಲಿಂಗು’ ಚಿತ್ರದ ಅಂತ್ಯದಲ್ಲಿ ಏಕೆ ತುಂಬಿಲ್ಲಾ ಅಂತ ? ’ಸಿದ್ಲಿಂಗು’ವಿಗೆ ಕಾರು ಸಿಗಬೇಕಿತ್ತು, ’ಮಂಗಳ’ ಸಾಯಬಾರದಿತ್ತು, ಹ್ಯಾಪಿ ಎಂಡಿಂಗ್ ಇರಬೇಕಿತ್ತು….ಇಂಥ ಅಭಿಪ್ರಾಯಗಳು ಸಾಕಷ್ಟು. ನಿಜ, ಮನುಷ್ಯ ಭರವಸೆಯ ಬೆಳಕಲ್ಲಿ ಸದಾ ಕ್ರಿಯಾಶೀಲನಾಗಿರಬೇಕು, ಜೀವಂತವಾಗಿರಬೇಕು. ಆದರೆ ಇವುಗಳಂತೇಯೇ ಪ್ರತೀ ಜೀವಗಳ ಅವಿಭಾಜ್ಯ ಅಂಗ ’ಆಕಸ್ಮಿಕ’….! ಇದಕ್ಕೆ ಸ್ಥಳ, ಸಮಯ, ವಿಷಯ, ವ್ಯಕ್ತಿ.. ಹೀಗೆ ಯಾವುದರ ನಿರ್ಭಂದನೆ ಆಗಲಿ ಅಥವಾ ಬಂಧನ ಆಗಲಿ ಇಲ್ಲಾ, ತನ್ನ ಪಾಡಿಗೆ ತಾನು ಬಂದು ಹೋಗುತ್ತದೆ. ಹಾಗಂತ ’ಆಕಸ್ಮಿಕ’ ದುರಂತದ ಛಾಯೆ ಅಲ್ಲ. ಯಾಕಂದರೇ ’ಆಕಸ್ಮಿಕ’ ಆರಂಭವೂ ಹೌದು, ಅಂತ್ಯವೂ ಹೌದು…!  ಇದನ್ನೇ ’ಸಿದ್ಲಿಂಗು’ವಿನ ಅಂತ್ಯದಲ್ಲಿ ಪ್ರಸ್ತುತಪಡಿಸಿರುವುದು. ’ಮಂಗಳ’ ಸಾವು ’ಆಕಸ್ಮಿಕ’, ಆದರೆ ’ಸಿದ್ಲಿಂಗು’ವಿನ ದುಃಖ ಸೋಲಲ್ಲಾ……! ಮುಂದೆ ಬದುಕು ಇದ್ದಿದ್ದೇ, ಭರವಸೆಯ ಬೆಳಕೂ ಇದ್ದಿದ್ದೇ…..! ಹೋರಾಟ ನಿರಂತರ…….

ಇಂಥ ಅಂತ್ಯವನ್ನ ಆಯ್ಕೆ ಮಾಡಿಕೊಂಡ ಕಾರಣ ಪ್ರಯೋಗಕ್ಕಾಗಿ….! ಈ ಪ್ರಯೋಗವನ್ನು ಕೂಡ ತುಂಬ ಸ್ಪಷ್ಟವಾಗೇ ಮಾಡಿದ್ದು. ಚಿತ್ರ ಸುಖಾಂತದಲ್ಲೋ ಅಥವಾ ದುಃಖಾಂತದಲ್ಲೋ ಮುಗಿಸಿದ್ದರೇ ಈ ಚರ್ಚೆಗಳು ಅಗುತ್ತಿರಲಿಲ್ಲ. ಜೊತೆಗೆ ಈ ಎರಡರಲ್ಲಿ ಯಾವುದಾದರು ಒಂದನ್ನು ಮಾಡಿದ್ದರೂ ಮಾಮೂಲಿಯಂತೆ ಚಿತ್ರ ಮುಗಿದು ಹೋಗುತ್ತಿತ್ತು. ಇದು ನನ್ನ ಮೊದಲ ಚಿತ್ರವಾಗಿದ್ದರಿಂದ ನಿರೂಪಣೆ ದ್ರುಷ್ಟಿಯಿಂದಲೂ, ಮುಖ್ಯವಾಗಿ ನನ್ನನ್ನು ಕಾಡುತ್ತಿದ್ದ ಈ ’ಆಕಸ್ಮಿಕ’ವೂ  ’ಸಿದ್ಲಿಂಗು’ವಿನ ಅಂತ್ಯವನ್ನ ’ಆಕಸ್ಮಿಕ ಆರಂಭವೂ ಹೌದು, ಅಂತ್ಯವೂ ಹೌದು’ ಎಂದು ನಿರೂಪಿಸಿದೆ.    

ಇದು ಯಾವುದೇ ಪಲಾಯನವಾದದ ಉತ್ತರ ಅಲ್ಲ, ಸ್ಪಷ್ಟ ಯೋಚನೆ, ದಿಟ್ಟ ನಿರ್ಧಾರ. 

ಏನೇ ಇರಲಿ, ’ಸಿದ್ಲಿಂಗು’ವನ್ನು ನಿಮ್ಮ ಅಂಗಳಕ್ಕೆ ಕರೆ ತಂದ ನಿಮ್ಮ ಪ್ರೀತಿ, ಮಮತೆ ಮತ್ತು ಅಭಿಮಾನಕ್ಕೆ ನಾನು, ನನ್ನ ತಂಡ ಚಿರರುಣಿ. ಇಷ್ಟು ಸಾಕು……..

ವಿಜಯಪ್ರಸಾದ್
ನಿರ್ದೇಶಕ

Contribute!

We welcome you to write on the Home Talkies Journals!

Feel free to express your views and ideas. Let's debate and progress. Any article welcome as long as they don't gossip. Send in your articles to info@hometalkies.com


Recent Articles