ಯಾಕೆ ಹೀಗೆ ? ಗುಣಮಟ್ಟದ ಬದುಕು ನಮಗೆ ಬೇಡವೇ? ಹೊಸ ಪ್ರಯೋಗಗಳನ್ನು ಆದರಿಸುವ ತಿಳುವಳಿಕೆ ಆಗಲಿ ಅಥವಾ ಅಂತಃಕರಣವಾಗಲಿ ನಮ್ಮಲ್ಲಿ ಇಲ್ಲವೇ? ಇದ್ದರೂ ಅದು ನಮ್ಮ ಚೌಕಟ್ಟಿನ ವ್ಯಕ್ತಿಗಳಿಗೆ ಮಾತ್ರ ಸೀಮಿತವೇ? ಕೊಳಕನ್ನ ದೂರ ಇಡುವ ಸಾಮರ್ಥ್ಯ ನಮಗೆ ಇಲ್ಲವೇ ಇಲ್ಲ ಎಂದಾದರೆ, ಹೇಡಿಗಳೇ? ಹೀಗೆ ಹಲವಾರು ಪ್ರಶ್ನೆಗಳು ನನ್ನನ್ನು ಕಾಡಲು ಶುರು ಇಟ್ಟಿವೆ…! ಇದಕ್ಕೆ ಕಾರಣ ಚಿತ್ರ ನಿರ್ದೇಶಕ ಪವನ್ ಕುಮಾರ್ ಅವರ ‘ಹೋಮ್ ಟಾಕೀಸ್’……!
‘ಹೋಮ್ ಟಾಕೀಸ್’ ನಿಜವಾಗಲೂ ಒಂದು ಅರ್ಥಪೂರ್ಣ ಪರಿಕಲ್ಪನೆ…! ಅಂತರ್ಜಾಲ ಅನುಕೂಲ ಇರುವ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕನ್ನಡ ಚಲನಚಿತ್ರವನ್ನ ನೋಡಬಹುದಾದ ನಿಮ್ಮ ಮನೆಯ ಚಿತ್ರಮಂದಿರ ಈ ‘ಹೋಮ್ ಟಾಕೀಸ್’…! ಜೊತೆಗೆ ಚಿತ್ರತಂಡ ಅಥವಾ ನಿರ್ದೇಶಕನ ಜೊತೆ ಸಂಪರ್ಕ ಸಾಧಿಸಿ, ನಿಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳಬಹುದಾದ ವೇದಿಕೆ ಈ ‘ಹೋಮ್ ಟಾಕೀಸ್’…!
ಈಗ ಈ ‘ಹೋಮ್ ಟಾಕೀಸ್’ ಬಗ್ಗೆ ತಕರಾರು ಎದ್ದಿದೆ. ತಕರಾರು ಎದ್ದಿದೆಯೋ ಅಥವಾ ಎಬ್ಬಿಸಿದ್ದಾರೋ ಅದು ನಿಗೂಢ…! ‘ಹೋಮ್ ಟಾಕೀಸ್’ ನಲ್ಲಿ ಬಿಡುಗಡೆ ಆಗಿರುವ ಚಲನಚಿತ್ರಗಳನ್ನು ಅಂತರ್ಜಾಲದಲ್ಲಿ ‘ನಕಲಿ’ ಮಾಡಲಾಗುತ್ತಿದೆ. ಹಾಗಾಗಿ ಹಣ ಪಾವತಿ ಮಾಡದೇ ಅಂತರ್ಜಾಲದಲ್ಲಿ ‘ನಕಲಿ’ ಮಾಡಿ ನೋಡಬಹುದಾದ ‘ಗಲೀಜು’ ಹಾದಿ ಇರುವಾಗ, ಹಣ ಪಾವತಿ ಮಾಡಿ ‘ಹೋಮ್ ಟಾಕೀಸ್’ ನಲ್ಲಿ ಯಾಕೆ ನೋಡಬೇಕೆಂಬ ಬಿಸಿ ಬಿಸಿಯಾದ ‘ಕೊಳಕು’ ಚರ್ಚೆ ನಿಜಕ್ಕೂ ವಿಷಾದ…!
ಮನುಷ್ಯನಿಗೆ ‘ಕನಸು’ ಮತ್ತು ‘ವ್ಯಾಪಾರ’ ಎರಡು ತುಂಬಾ ಮುಖ್ಯ. ‘ಹೋಮ್ ಟಾಕೀಸ್’ ನಲ್ಲಿ ‘ಕನಸೂ’ ಇದೆ, ‘ವ್ಯಾಪಾರವೂ’ ಇದೆ. ನಿರ್ಮಾಪಕರಿಗೆ, ತಾಂತ್ರಿಕ ವರ್ಗದವರಿಗೆ, ಕಲಾವಿದರಿಗೆ ಮತ್ತು ಇತರರಿಗೆ ‘ಹೋಮ್ ಟಾಕೀಸ್’ ವಹಿವಾಟಿನ ಅನುಕೂಲ ಮತ್ತು ಲಾಭ ಹೇಗೆ ಎಂಬುದು ಪವನ್ ಕುಮಾರ್ ಈಗಾಗಲೇ ತಿಳಿಸಿದ್ದಾರೆ. ಆದರೆ ಈಗ ‘ಹೋಮ್ ಟಾಕೀಸ್’ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳನ್ನು ಡೌನ್ ಲೋಡ್ ಮಾರ್ಗದಲ್ಲಿ ‘ನಕಲಿ’ ಮಾಡುತ್ತಿರುವುದು ದುರದೃಷ್ಟಕರ…!
‘ನಕಲಿ’ ಮಾಡುವುದರ ಬಗ್ಗೆ ಎಚ್ಚರ ಮೂಡಿಸುವುದು ಸ್ವಾಗತ. ಆದರೆ ಅದೇ ನೆಪದಲ್ಲಿ ‘ಹೋಮ್ ಟಾಕೀಸ್’ ಪರಿಕಲ್ಪನೆಗೆ ಮಸಿ ಹಚ್ಚುವುದು ಎಷ್ಟು ಸೂಕ್ತ? ಚಿತ್ರ ಬಿಡುಗಡೆ ಆಗದ ಜಗತ್ತಿನ ಎಷ್ಟೋ ಸ್ಥಳಗಳಲ್ಲಿ ‘ಹೋಮ್ ಟಾಕೀಸ್’, ಕನ್ನಡ ಚಿತ್ರಗಳನ್ನ ತನ್ನ ಮಡಿಲಲ್ಲಿ ತುಂಬಿಕೊಂಡು ಪ್ರದರ್ಶಿಸುತ್ತಿರುವುದೇ ತಪ್ಪೇ ? ಇಂಥ ಪ್ರಯೋಗಗಳನ್ನ ತುಂಬು ಹೃದಯದಿಂದ ಸ್ವಾಗತಿಸಿ, ಪ್ರೋತ್ಸಾಹ ತುಂಬದೇ ಪರೋಕ್ಷವಾಗಿ ಕೊಲ್ಲುವ ಪ್ರಯತ್ನ ನಾಚಿಕೆಗೇಡಿತನ…! ವ್ಯಾಪಾರ, ವ್ಯವಸಾಯ, ಕ್ರಿಯಾಶೀಲ ಕೆಲಸಗಳು… ಹೀಗೆ ಯಾವುದೇ ವಿಷಯದಲ್ಲೇ ಅಗಲಿ ಪೈಪೋಟಿ ಆರೋಗ್ಯಕರವಾಗಿರಬೇಕು, ಅದು ಬಿಟ್ಟು ವ್ಯಕ್ತಿಗತವಾಗಲಿ ಅಥವಾ ಗುಂಪುಗಾರಿಕೆಯಿಂದಾಗಲೀ ಒಳ ಸಂಚು ನಡೆಸುವ ತಂತ್ರ ಶೋಭೆಯಲ್ಲ…!
ಹೋರಾಟದ ಮೂಲ ಉದ್ದೇಶ ‘ನಕಲಿ’ ಧಿಕ್ಕರಿಸುವುದೇ ಆದರೆ ಅದನ್ನು ಬಗ್ಗುಬಡಿಯುವುದಕ್ಕೆ ಚಿಂತಿಸೋಣ. ಅದು ಬಿಟ್ಟು ಅರ್ಥಪೂರ್ಣ ಪ್ರಯೋಗಗಳನ್ನೇ ಧಿಕ್ಕರಿಸುವುದು ಎಷ್ಟು ಸಮಂಜಸ? ನಮ್ಮ ಯಾವುದೇ ಹೆಜ್ಜೆಗಳು ನಮ್ಮ ಗುಣಮಟ್ಟದ ಬದುಕನ್ನ ಸೂಚಿಸುತ್ತದೆ. ‘ನಕಲಿ’ ಎಂಬ ಕೊಳಕು ನಮಗೆ ನಿಜಕ್ಕೂ ಅನಿವಾರ್ಯವೇ? ಅಥವಾ ನಾವು ಅಷ್ಟು ದುರ್ಬಲರೆ ? ಯೋಚಿಸಬೇಕಾಗಿದೆ….!
ಬನ್ನಿ, ತುಂಬು ಹೃದಯದಿಂದ ಹೊಸ ಪ್ರಯೋಗಗಳನ್ನು ಸ್ವಾಗತಿಸಿ. ಪ್ರತಿ ಜೀವಗಳ ಬೆಂಬಲ ಮತ್ತು ಪ್ರೋತ್ಸಾಹ ‘ಅಸಲಿ’ ಬದುಕಿಗೆ ಸದಾ ಇರಲಿ.
ವಿಜಯಪ್ರಸಾದ್
‘ಸಿದ್ಲಿಂಗು’ ಚಿತ್ರ ನಿರ್ದೇಶಕ
We welcome you to write on the Home Talkies Journals!
Feel free to express your views and ideas. Let's debate and progress. Any article welcome as long as they don't gossip. Send in your articles to info@hometalkies.com