matrix

ಇದೇನಪ್ಪ ಕೆಂಪು, ನೀಲಿ ಮಾತ್ರೆ ಅಂತೆಲ್ಲ ಇದೆ ಅಂತ ಕನ್-ಫ್ಯುಸ್ ಆಗಬೇಡಿ. ಆ ಬಣ್ಣಗಳು ಹೇಳುವ ಎರಡು ಸಂದೇಶದ ಸುತ್ತ ಇವತ್ತೊಂದು ಕತೆ ಹೇಳುವೆ. ಕೆಂಪು ಮಾತ್ರೆ ಮತ್ತು ನೀಲಿ ಮಾತ್ರೆ ಎರಡು ಮನಸ್ಥಿತಿಯನ್ನು ಹೇಳುತ್ತವೆ. ನೀಲಿ ಮಾತ್ರೆ ಅನ್ನುವುದು ಖುಶಿಯಾಗಿ ಮರೆತುಬಿಡಬಹುದಾದ ಮಾಯೆ, ಭ್ರಮೆಯನ್ನು ತಿಳಿಸಿದರೆ ಕೆಂಪು ಬಣ್ಣ ಕಹಿಯಾದರೂ ಒಪ್ಪಬೇಕಾದ ಕಟು ಸತ್ಯ ಅನ್ನುವುದನ್ನು ಪ್ರತಿನಿಧಿಸುತ್ತೆ. ನೀವು ಇಂಗ್ಲಿಶಿನ ಮ್ಯಾಟ್ರಿಕ್ಸ್ ಸಿನ್ಮಾ ನೋಡಿದ್ರೆ ಇದು ನಿಮಗೆ ಈಗಾಗಲೇ ಗೊತ್ತಾಗಿರುತ್ತೆ. ಆ ಸಿನ್ಮಾದಿಂದಲೇ ಈ ಕೆಂಪು, ನೀಲಿ ಮಾತ್ರೆಗಳ ವಿಷಯ ಜನಪ್ರಿಯವಾಗಿತ್ತು. ಆ ಸಿನ್ಮಾ ನೋಡಿರೊರಿಗೆಲ್ಲ ಮಾರ್ಪಿಯಸ್ ಹೇಳುವ ಈ ಸೀನ್ ನೆನಪಿರುತ್ತೆ. ಅವನು ಹೇಳ್ತಾನೆ “ಇದು ನಿನ್ನ ಕೊನೆಯ ಚಾನ್ಸ್. ಇದಾದ ಮೇಲೆ ಹಿಂತಿರುಗಿ ನೋಡೊ ಅವಕಾಶವಿಲ್ಲ. ಒಂದೊ ನೀಲಿ ಮಾತ್ರೆ ತಗೊತಿಯಾ, ಅಲ್ಲಿಗೆ ಈ ಕತೆ ಮುಗಿಯುತ್ತೆ. ನೀನು ನಿನ್ನ ಹಾಸಿಗೆ ಮೇಲಿಂದ ಏಳ್ತಿಯಾ ಮತ್ತೆ ನಿಂಗೆ ಏನ್ ಕಾಣ್ಸತ್ತೋ ಅದನ್ನೇ ನಂಬ್ತಿಯಾ. ಅದೇ ನಿನ್ನ ಜಗತ್ತು. ಇಲ್ಲಾ, ಕೆಂಪು ಮಾತ್ರೆ ತಗೊಂಡು ಈ ಕನಸಿನ ಲೋಕದಲ್ಲೇ ಇರ್ತಿಯಾ ಮತ್ತೆ ಈ ಲೋಕದ ವಿಸ್ಮಯ ನಾನು ನಿನಗೆ ಹೇಳ್ತಿನಿ. ಯೋಚನೆ ಮಾಡು, ಏನ್ ಮಾಡ್ತಿಯಾ ಅನ್ನೋ ನಿರ್ಧಾರ ನಿಂದು.”

ಈ ದೃಶ್ಯ ನನಗೆ ಯಾವಾಗಲೂ ತಲೆಲಿ ಹುಳಾ ಬಿಡೋದು. ನಾನು ದೊಡ್ಡವನಾಗ್ತಾ ಯಾವಾಗೆಲ್ಲ ಏನಾದ್ರೂ ಮುಖ್ಯವಾದ ನಿರ್ಧಾರ ಮಾಡಬೇಕೊ, ಆಗೆಲ್ಲ ಈ ದ್ರ‍ಶ್ಯ ನನ್ನ ತಲೆಲಿ ಬರೋದು. ಈಗ ನನಗೆ 30 ವರ್ಷ. ಒಂದಂತು ನನಗೆ ಅರ್ಥ ಆಗಿದೆ. ಜೀವನದ ಪ್ರತಿ ಕ್ಷಣ ನಿಮ್ಮ ಕಣ್ಣೆದುರು ಬರೋ ಒಂದೇ ಒಂದು ನಿಜವಾದ ವಸ್ತು ಅಂದ್ರೆ ಆಯ್ಕೆಗಳು..ಸ್, ಆಯ್ಕೆಗಳು..

ನಾವು ಯಾವಾಗಲೂ ಆಯ್ಕೆ ಮಾಡ್ಕೊತಾ ಇರ್ತಿವಿ, ಯಾವಾಗ್ಲೂ ” ಇದಾದ್ರೆ ಇದು – ಇದಲ್ಲ ಅಂದ್ರೆ ಇದು” ಅಂತ ಯೋಚನೆಯ ಸುಳಿಯಲ್ಲೇ ಮುಳುಗಿರ್ತಿವಿ. ಈ ಕ್ಷಣದಲ್ಲೂ ನಿಮ್ಮ ಒಳ ಮನಸ್ಸ ನಿಮಗೆರಡು ಆಯ್ಕೆ ಕೊಡ್ತಿದೆ. ಒಂದು, ಈ ಪೋಸ್ಟ್ ಪೂರ್ತಿ ಓದೋದು, ಇಲ್ಲ ಈಗಲೇ ನಿಲ್ಸಿ, ಕ್ಲೋಸ್ ಮಾಡೋದು. ಇದರಲ್ಲಿ ಒಂದನ್ನ್ ನೀವು ಆಯ್ಕೆ ಮಾಡ್ಕೊತೀರಾ. ಹಾಗಿದ್ರೆ ನೀವು ನುಂಗ್ತಾ ಇರೋದು ಯಾವ ಮಾತ್ರೆ? ನೀಲಿನಾ? (ಏ ಬಿಡಮ್ಮ ನಂಗೊತ್ತು, ಇವನು ಏನ್ ಕುಯ್ತಾನೆ ಅಂತ ಹೇಳಿ ಈ ಪುಟ ಮುಚ್ಚಿ ಬಿಡಿ) ಇಲ್ಲ ಕೆಂಪೋ (ಇರು ನೋಡೊಣ, ಅದೇನ್ ಹೇಳ್ತಾನೆ ಅಂತ ಪೂರ್ತಿ ಓದೋಣ)

ನನಗನ್ನಿಸಿರೋದು ಏನಂದ್ರೆ 99% ಜನ ನೀಲಿ ಮಾತ್ರೆನೇ ನುಂಗೋದು. ಅವರೆಲ್ಲರು ಅವರ ತಲೆಲಿ ಪ್ರೋಗ್ರಾಮ್ ಮಾಡ್ಕೊಂಡು ಬಿಟ್ಟಿರ್ತಾರೆ. ಏನಂದ್ರೆ “ಎಲ್ಲ ಬಿಟ್ಟಾಕಿ,ಏನು ಆಗೇ ಇಲ್ಲ” ಅನ್ನುವಂತೆ ಇರೋದೇ ಸರಿ ಅಂತ.

ಆದ್ರೆ ನನ್ನ ಅನುಭವ ಏನ್ ಹೇಳುತ್ತಾ ಗೊತ್ತಾ? ಕೆಂಪು ಮಾತ್ರೆಯಿದೆಯಲ್ಲ ಅದು ಸಕತ್ ಮಜಾ ಕೊಡೊ ಮಾತ್ರೆ ! ಯಾಕ್ ಗೊತ್ತಾ? ಅದು ನಿಮಗೆ ರಾತ್ರಿ ಒಳ್ಳೆ ನಿದ್ದೆ ಬರೋ ಹಾಗೆ ಮಾಡುತ್ತೆ, ಬೆಳಿಗ್ಗೆ ಏಳೋಕೆ ಒಂದು ಗುರಿ ಕೊಡುತ್ತೆ. ಜಗತ್ತೇ ಮುಳುಗೊಯ್ತು ಅನ್ನೋ ಹೊತ್ತಲ್ಲೂ ನಿಮ್ಮನ್ನ ಖುಶಿಯಾಗಿ ಇಡುತ್ತೆ, ಪ್ರತಿ ಕ್ಷಣ ನೀವು ಬದುಕ್ತಾ ಇರೋ ಭಾವ ಕೊಡುತ್ತೆ. ಒಂದು ಗಳಿಗೆ ನಿಂತು, ಲೈಫ್ ಅಲ್ಲಿ ಕೆಂಪು ಮಾತ್ರೆ ಯಾವಾಗ ತಗೊಂಡಿದ್ರಿ ಈ ಹಿಂದೆ ಅಂತ ಸ್ವಲ್ಪ ನೆನಪು ಮಾಡ್ಕೊಳ್ಳಿ. ಮುಂದೆ ಓದಬೇಡಿ, ಒಂದೇ ಒಂದು ಕ್ಷಣ ಯೋಚ್ನೆ ಮಾಡಿ. ಕೊನೆ ಬಾರಿ ನೀವು ಯಾವಾಗ ಭ್ರಮೆಯ ಮೇಲೆ ರಿಯಾಲಿಟಿಯನ್ನ ಆಯ್ಕೆ ಮಾಡ್ಕೊಂಡಿದ್ರಿ?

http://www.dreamstime.com/-image225519612012 ರ ಫೆಬ್ರವರಿಯಲ್ಲಿ ನನ್ನ ಮುಂದೆ ಕೆಂಪು, ನೀಲಿ ಎರಡು ಮಾತ್ರೆಗಳ ಆಯ್ಕೆ ಬಂದಿತ್ತು. ಒಬ್ರು ಸಕತ್ ದುಡ್ಡಿರೋ ನಿರ್ಮಾಪಕರೊಬ್ಬರ ರೂಪದಲ್ಲಿ ನೀಲಿ ಮಾತ್ರೆ ಬಂದಿತ್ತು. ಅವರ ಮಗನನ್ನು ಮತ್ತೆ ಹೀರೋ ಆಗಿ ಲಾಂಚ್ ಮಾಡಲು ನನ್ನ ಕೈಲಿ ಒಂದು ಸಿನ್ಮಾ ಮಾಡಿಸಬೇಕು ಎಂದು ಅವರು ಬಂದಿದ್ರು. ಅದಕ್ಕಾಗಿ ಅವರು ನನಗೆ 9 ಲಕ್ಷದ ಆಫರ್ ಕೂಡ ಕೊಡಲು ರೆಡಿ ಇದ್ರು. ಅಷ್ಟೊಂದು ದುಡ್ಡು ನಾನು ನನ್ನ ಹತ್ತು ವರ್ಷದ ಕರಿಯರ್ ಅಲ್ಲಿ ನೋಡಿಲ್ಲ. ನನ್ನ ಕಲೆ ಕೊಡುವ ಕಿಕ್ ಅಲ್ಲೇ ತೃಪ್ತನಾಗಿ ನಾನಿದ್ದೆ. ಆದರೆ ಯಾರಿಗೆ ಬೇಡ ಹೇಳಿ ಬರೀ ಆರು ತಿಂಗಳಲ್ಲಿ 9 ಲಕ್ಷ ದುಡಿಯೋ ಅವಕಾಶ. ಒಪ್ಕೊಂಡಿದ್ರೆ 2012ರ ಸೆಪ್ಟೆಂಬರ್ ಹೊತ್ತಿಗೆ ನನ್ನ ಎರಡನೆಯ ಸಿನ್ಮಾ ಆಗಲೇ ರಿಲೀಸ್ ಆಗಿರ್ತಿತ್ತು. ಆ ಸಿನ್ಮಾ ಚೆನ್ನಾಗಿರತಿತ್ತೋ, ಕೆಟ್ಟದಾಗಿರತಿತ್ತೋ ಅನ್ನೋದೆಲ್ಲ ಬೇಕಿಲ್ಲ, ಯಾಕೆಂದ್ರೆ ನಾನು ನನ್ನ ಎರಡನೆಯ ಸಿನ್ಮಾ ಮಾಡಿದ ಮಾಯೆಯಲ್ಲ ತೇಲಾಡ್ಕೊಂಡು ಇರ್ತಿದ್ದೆ ಜೊತೆಗೆ ಒಂದಿಷ್ಟು ಕಾಸು ಮಾಡ್ಕೊಂಡಿರ್ತಿದ್ದೆ. ಅಷ್ಟೇ ಏಕೆ, 9 ಲಕ್ಷದ ಇನ್ನೊಂದು ಸಿನ್ಮಾ ಒಪ್ಕೊಂಡು ಇನ್ನೊಂದು ನೀಲಿ ಮಾತ್ರೆ ತಿಂದ್ಕೊಂಡು ನನ್ನ ಇಲೂಶನ್ನಿನಲ್ಲೇ ನಾನಿರ್ತಿದ್ದೆ. ಎಷ್ಟೇ ಅಂದ್ರೂ ಬಿಟ್ಟಾಕಿ ಆರಾಮಾಗಿರೋದು ಒಂದರ್ಥದಲ್ಲಿ ಸ್ವರ್ಗ ಸುಖ ಅಲ್ಲವೇ.  .

ಇನ್ನೊಂದು ಕಡೆ ಲೂಸಿಯಾ ರೂಪದಲ್ಲಿ ನನ್ನ ಕಣ್ಣ ಮುಂದೆ ಕೆಂಪು ಮಾತ್ರೆ ಕಂಡಿತ್ತು. ಕೆಂಪು ಮಾತ್ರೆ ಭ್ರಮೆಯಲ್ಲ, ಅದು ರಿಯಾಲಿಟಿ. ಲೂಸಿಯಾ ನನ್ನ ಮುಂದಿದ್ದ ರಿಯಾಲಿಟಿ ಆಗಿತ್ತು. ಆದ್ರೆ ಈ ಕೆಂಪು ಮಾತ್ರೆ ತಗೊಂಡ್ರೆ ಈ ಸಿನ್ಮಾ ಮುಗಿಸೋವರೆಗೂ ನನಗೆ ಯಾವ ದುಡಿಮೆಯೂ ಇಲ್ಲ. ಕೈಗೆ ಬಂದ 9 ಲಕ್ಷದ ಆಫರ್ ಕೂಡ ಕೈ ಬಿಟ್ಟು ಹೋಗೊದು. ಕೆಂಪನ್ನು ಒಪ್ಪಿಕೊಳ್ಳೊದು ಒಂತರ ಕಲ್ಲುಮುಳ್ಳನ ಹಾದಿಯೆಂಬಂತಿತ್ತು. ಆದರೆ ಆ ಆಯ್ಕೆ ಭ್ರಮೆಯಲ್ಲ, ಇಲೂಶನ್ ಅಲ್ಲ, ಅದು ರಿಯಾಲಿಟಿ. ಅಲ್ಲಿ ಸಿಗೋ ಚಿಕ್ಕ ಚಿಕ್ ಸಂತೋಷಗಳು ನಿಜವಾದದ್ದಾಗಿರೋವು. ಅಲ್ಲಾಗೋ ನೋವು, ಸಂಕಟಗಳು ನಿಜವಾದದ್ದಾಗಿರೋವು. ನೀಲಿ ಮಾತ್ರೆ ತಗೊಂಡಿದ್ರೆ ಇದೆಲ್ಲ ರಗಳೆಯೇ ಇರುತ್ತಿರಲಿಲ್ಲ.    .

ನಾನು ಕೆಂಪು ಮಾತ್ರೆಯನ್ನೇ ಆಯ್ದುಕೊಂಡೆ. ಇದಾದ್ರೆ ಅದು- ಇದಲ್ಲದಿದ್ರೆ ಇನ್ನೊಂದು ಅಂತೆಲ್ಲ ಯೋಚಿಸೋ ಮೊದಲೇ ಜಿಗಣೆ ತರ ಇದನ್ನೇ ಮಾಡೋದು ಅಂತ ಕಚ್ಕೊಂಡು ಲೂಸಿಯಾ ಅನ್ನುವ ಕನಸಿನ ಹಿಂದೆ ಬಿದ್ದೆ. ಇವತ್ತಿಗೆ ಅನ್ನಿಸುತ್ತಿರುವುದು ಇದು ನನ್ನ ಜೀವನದ ಎರಡನೆ ಚಿಂದಿ ನಿರ್ಧಾರ ಅಂತ. ಮೊದಲನೆಯದ್ದು ಇಂಜಿನಿಯರಿಂಗ್ ಓದಿಗೆ ಸಲಾಮು ಹೊಡೆದು ಅರ್ಧಕ್ಕೆ ಕಾಲೇಜು ಬಿಟ್ಟಿದ್ದು.

ಲೂಸಿಯಾ ಗೆಲ್ಲುತ್ತಾ? ಸೋತೂ ಹೋಗಬಹುದು. ಅದಕ್ಕಾಗಿ ಬಸಿದ ಒಂದು ವರ್ಷ ಪೂರ್ತಿ ಹೊಳೆಯಲ್ಲಿ ಹುಣ್ಸೆ ಹಣ್ಣು ತೊಳೆದಂಗಾಗಬಹುದು. ಸಿನ್ಮಾ ಬಿಡಿ, ಇಡೀ ಪ್ರಾಜೆಕ್ಟೇ ಸೋತು ಹೋಗಬಹುದು, ನನಗೊಂದು ಪೈಸಾನೂ ಸಿಗದಿರಬಹುದು. ಮಾತಾಡೋ ಬಾಯಲ್ಲಿ ನಾನೊಬ್ಬ ಜೋಕರ್ ಅಂತಲೂ ಅನ್ನಿಸಿಕೊಳ್ಳಬಹುದು. ಆದ್ರೆ ಇದೆಲ್ಲದರ ಮಧ್ಯ ನಾನು ಪಡ್ಕೊಳ್ಳೊದು ಇದೆಲ್ಲವನ್ನು ಮೀರಿದ್ದು. ಇಡೀ ಜೀವನ ಈ ಅನುಭವದ ಕತೆಯನ್ನು ಹೇಳಿಕೊಳ್ಳುವ, ಹಂಚಿಕೊಳ್ಳುವ ಹಕ್ಕು ನನ್ನದಾಗಬಹುದು. ಕಟು ವಾಸ್ತವದಲ್ಲೂ ನಾನು ನಂಬಿದ್ದನ್ನು ಬಿಟ್ಟುಕೊಡದೇ ಅದಕ್ಕಾಗಿ ಬದುಕಿ ತೋರಿದ ಹೆಮ್ಮೆ ನನ್ನದಾಗಬಹುದು. ಅಷ್ಟು ಮೀಟರ್ ನನಗಿತ್ತೂ ಅಂತ ಹೆಮ್ಮೆಯಿಂದ ಹೇಳ್ಕೊಬಹುದು.

failಲೂಸಿಯಾ ಜೊತೆ ಕೆಲಸ ಮಾಡ್ತಿರೋ ಹೆಚ್ಚು ಕಮ್ಮಿ ಎಲ್ಲರೂ ತಾವು ಕೆಂಪ ಮಾತ್ರೆ ಆಯ್ದುಕೊಂಡ್ವಿ ಅಂತ ಹೇಳ್ಕೊಬಹುದು. ರಿಸ್ಕೇ ತೆಗೆದುಕೊಳ್ಳದ ಹೇತ್ಲಾಂಡಿ ಜೀವನ ಬದುಕಲಿಲ್ಲ ಅಂತ ಎದೆ ತಟ್ಟಿ ಹೇಳಬಹುದು. 110 ಜನರಿಗೆ ತಮ್ಮ ದುಡಿದ ಹಣವನ್ನು ಈ ಸಿನ್ಮಾದ ಮೇಲೆ ಹಾಕುವ ಹುಚ್ಚು ಧೈರ್ಯವಿತ್ತು. ಪೂರ್ಣಚಂದ್ರನಿಗೆ ಒಳ್ಳೆ ಸಂಬಳ ಬರ್ತಿದ್ದ ತನ್ನ ಸಾಫ್ಟ್-ವೇರ್ ಕೆಲಸ ಬಿಟ್ಟು ಸಂಗೀತ ಮಾಡೋಕೆ ಅಂತ ಬರೋ ಧೈರ್ಯ ಇತ್ತು. ಸಿದ್ದಾರ್ಥ ನೂಣಿಗೆ ತನ್ನ ಆಡ್  ಫಿಲ್ಮ್ಸ್ ಪ್ರಾಜೆಕ್ಟ್ಸ್ ಎಲ್ಲ ಬಿಟ್ಟು ಕಡ್ಲೆಪುರಿಯಷ್ಟು ಸಂಪಾದನೆ ಕೊಟ್ಟ ಈ ಸಿನ್ಮಾ ಮೇಲೆ ಕೆಲಸ ಮಾಡೋವಷ್ಟು ಗುಂಡಿಗೆ ಇತ್ತು. ನಟರು, ತಾಂತ್ರಿಕ ವರ್ಗದವರು ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಕೆಂಪು ಮಾತ್ರೆಯನ್ನೇ ನುಂಗಿದ್ದು. ಸಿನ್ಮಾದಲ್ಲಿ ಅವರೆಲ್ಲರ ಶ್ರಮ ಕಂಡಿರೋ ನಾನು ಅದನ್ನು ಗ್ಯಾರಂಟಿಯಾಗಿ ಹೇಳಬಲ್ಲೆ.

ಈ ಪೋಸ್ಟ್ ಮೂಲಕ ನಾನು ಏನ್ ಹೇಳೊಕೆ ಹೊರಟೆ ಅಂದ್ರೆ ಈ ಪ್ರಾಜೆಕ್ಟ್ ಅಲ್ಲಿ ಕಳೆದುಕೊಳ್ಳೊ ಬಗ್ಗೆ ನಮಗಾರಿಗೂ ಭಯ ಇಲ್ಲ. ಲೂಸಿಯಾ ಹಿಟ್ ಆಗುತ್ತೋ ಇಲ್ವೋ ಅನ್ನೋದು ನನಗೇನು ಅಂತ ದೊಡ್ಡ ವಿಷ್ಯ ಅಲ್ಲ. ಆದರೆ ಯಾವುದು ನಿಜಕ್ಕೂ ಒಂದು ಕೊರಗು ಉಳಿಸುತ್ತೆ ಗೊತ್ತಾ? ಅದು “ಇನ್ನೂ ಎಷ್ಟೊಂದೆಲ್ಲ ಮಾಡಬಹುದಿತ್ತು, ಆದ್ರೆ ಮಾಡೊಕಾಗ್ಲಿಲ್ವಲ್ಲ” ಅನ್ನೋದು. ಅದೇ ಈ ಕತೆಯ ಕೆಟ್ಟ ಅಂತ್ಯವಾದೀತು. ದೊಡ್ಡ ಸಂಖ್ಯೆಯಲ್ಲಿ ಜನ ಕೆಂಪು ಮಾತ್ರೆ ತಗೊಳ್ಳಲಿಲ್ವಲ್ಲ ಅನ್ನೋದು ಈ ಕತೆಯ ದೊಡ್ಡ ಹಾನಿ, ದೊಡ್ಡ ನಿರಾಶೆಯಾದೀತು. ಅದು ಈ ಕನಸಿನ ದುರಂತ ಅಂತ್ಯವಾದೀತು. ಅಂತಹದೊಂದು ಅಂತ್ಯ ನನಗಿಷ್ಟವಿಲ್ಲ. ಅದಕ್ಕಾಗೇ ಹಗಲು ರಾತ್ರಿ ಈ ಕತೆಯ ಅಂತ್ಯ ಬದಲಾಯಿಸಬೇಕು ಎಂದು ಹಟಕ್ಕೆ ಬಿದ್ದಿರುವೆ.

ಈ ಚಿತ್ರ ಬಿಡುಗಡೆ ಮಾಡಲು ಒಬ್ಬ ಒಳ್ಳೆಯ ಹಂಚಿಕೆದಾರರನ್ನು ಹಿಡಿಯುವುದು ನನಗೇನು ಕಷ್ಟವಲ್ಲ. ನನ್ನ ಆತ್ಮವನೇ ಮಾರಿಕೊಂಡು ಒಬ್ಬ ಯಾರೋ ಶ್ರೀಮಂತನ ಮಗನ ಸಿನ್ಮಾ ಒಪ್ಪಿಕೊಂಡ್ರೆ ಸಾಕು ಈ ಸಿನ್ಮಾ ಬಿಡುಗಡೆಯಾಗುತ್ತೆ. ಈ ಸಿನ್ಮಾ ಗೆದ್ದು, ನನಗೆ ದುಡ್ಡೂ ಬರಬಹುದು, ಆದರೂ ಅದು ಗೆಲುವಲ್ಲ, ಅದು ಸೋಲು, ಅದು ನಿಮ್ಮ ಸೋಲು.

ಈ ಪ್ರಾಜೆಕ್ಟ್ ನೋಡುಗರಿಂದ ಸಿನೆಮಾ ಉದ್ಯಮಕ್ಕೆ ಒಂದು ಸಂದೇಶ ಕಳಿಸುವ ಹಾಗಾಗಬೇಕು. ಒಂದು ಸಿನ್ಮಾ ಗೆಲ್ಲದಿರಲು ನೂರು ಕಾರಣ ಕೊಡುವ ಈ ಉದ್ಯಮ ಒಂದೇ ಒಂದು ಸಮಸ್ಯೆಗೂ ಪರಿಹಾರ ಕೊಡದ ಈ ಉದ್ಯಮಕ್ಕೆ – ನೀವು – ನೋಡುಗರು ಉತ್ತರ ಕೊಡಬೇಕು. ಅವರ ಎಲ್ಲ ಲೆಕ್ಕಾಚಾರವನ್ನು ನೀವು ಸುಳ್ಳುಮಾಡಬೇಕು. ನಮ್ಮ ಉದ್ಯಮದ ಸಮಸ್ಯೆಗಳಿಗೆ ಸರಳವಾದ ಪರಿಹಾರಗಳಿವೆ ಅನ್ನೋದನ್ನ ಉದ್ಯಮಕ್ಕೆ ನೀವು ತಿಳಿಸಬೇಕು. ಪ್ರಾಜೆಕ್ಟ್ ಲೂಸಿಯಾ ಆ ಕೆಲಸ ಮಾಡಲು ನಿಮ್ಮ ಬಳಿ ಇರುವ ಒಂದೇ ಒಂದು ಹಾದಿಯಾಗಿದೆ.

ಪ್ರಾಜೆಕ್ಟ್ ಲೂಸಿಯಾ ಮೂಲಕ ಒಂದು ಕನ್ನಡ ಸಿನೆಮಾ ಮಾಡುವುದಕ್ಕೂ, ನೋಡುವುದಕ್ಕೂ ಇದ್ದ ಘನತೆಯನ್ನು ಮರಳಿ ತರಬೇಕು ಅನ್ನುವುದು ನನ್ನಾಸೆ. ನಮ್ಮ ಸಿನೆಮಾಗಳನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚಿಸುವ ಹಾಗಾಗಬೇಕು. ಈ ಉದ್ಯಮ ಸಕತ್ ವ್ಯಾಪಾರ ಮಾಡಬೇಕು, ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗವಕಾಶ ಕಲ್ಪಿಸಬೇಕು, ನಮ್ಮ ಭಾಷೆ, ನಮ್ಮ ಗೌರವವನ್ನು ಎತ್ತಿ ಹಿಡಿಯಬೇಕು. ಒಂದೀಡಿ ಉದ್ಯಮವೇ ಇದರಲ್ಲಿ ಎಡವಿದಾಗ – ನೀವು- ನೋಡುಗರು ಎದ್ದು ನಿಂತು ಅವರಿಗೊಂದು ಸಂದೇಶ ಕೊಡಬೇಕು.

shout

250ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಲೂಸಿಯಾ ತೆರೆ ಕಾಣಿಸಬೇಕು ಅನ್ನುವದು ಅಸಾಧ್ಯವಾದ ಕನಸೇನಲ್ಲ. ಆದರೆ ಇದು “ಕನ್ನಡ ಕರ್ನಾಟಕದ ನುಡಿ, ಕನ್ನಡ ಚಿತ್ರಗಳಿಗೆ ರಾಜ್ಯದೆಲ್ಲೆಡೆ ಬಿಡುಗಡೆಯಾಗುವ ಹಕ್ಕಿದೆ” ಅನ್ನುವುದನ್ನು ಕೂಗಿ ಹೇಳುವ ಪ್ರಯತ್ನ. ಆದರೆ ಅದಕ್ಕಾಗಿ ನಾವೇನು ಅಳುವುದಿಲ್ಲ, ಕಾನೂನು ಮೀರಿ ಸಿಗಲೇಬೇಕು ಎಂದು ಬೇಡಿಕೆಯೊಡ್ಡುವುದಿಲ್ಲ. ಈ ಕನಸು ನನಸಾಗಿಸಲು ಎಷ್ಟು ಹಣ ಬೇಕೋ ಅದನ್ನು ನಾವು ತೆರುವೆವು. ಇದು ಕಷ್ಟದ ಕೆಲಸ ಅನ್ನುವುದನ್ನು ನಾನು ಒಪ್ಪುತ್ತೇನೆ, ಆದರೆ ಇದು ಅಸಾಧ್ಯವೇನಲ್ಲ. ಈ ಕನಸು ನನಸಾಗಿಸುವ ಹಟ ನೀವೂ ತೊಟ್ಟಾಗಲೇ ಇದು ನನಸಾಗುವುದು. ಬರೀ 15000 ಬದಲಾವಣೆಗೆ ಹಾತೊರೆಯುವ ಕನ್ನಡದ ಮನಸುಗಳು ಸಾಕು ಒಂದು ವಾರದ ಏಳು ದಿನ ಸರಾಸರಿ 400 ಸೀಟಿನ 250 ಚಿತ್ರಮಂದಿರಗಳಲ್ಲಿ ದಿನಕ್ಕೆ ನಾಲ್ಕು ಆಟ ಪ್ರದರ್ಶಿಸಲು, ಒಂದೇ ವಾರದಲ್ಲಿ 28 ಲಕ್ಷ ಜನರನ್ನು ತಲುಪಲು.

ನಾನು ಬೇಕಾದಶ್ಟು ಹೇಳಾಯ್ತು ಅಂದಕೊಳ್ಳುವೆ. ನನಗೆ ಅರ್ಥ ಆಗಲ್ಲ ನಿಮ್ಮಲ್ಲಿ ಹಲವರು ಇದು ಕೇವಲ ನನ್ನೊಬ್ಬನ ಹೋರಾಟಯೆಂದು ಅಂದುಕೊಳ್ಳುವುದ್ಯಾಕೆ ಎಂದು? ಇದು ನನ್ನೊಬ್ಬನ ಹೋರಾಟವಲ್ಲ, ಇದು ನಮ್ಮ ಹೋರಾಟ.  ಇದು “ನಮ್ಮ” ಕನಸು ಅಂದುಕೊಳ್ಳದಿದ್ದರೆ ನಾನು ನನ್ನ ಸಮಯ ಹಾಳು ಮಾಡುತ್ತಿದ್ದೇನೆನೋ ಅನ್ನಿಸುತ್ತೆ. ನಿಜ ಹೇಳಬೇಕು ಅಂದ್ರೆ ನನಗೆ ಹಿಂದಿ ಚೆನ್ನಾಗೂ ಬರುತ್ತೆ, ಹಿಂದಿಯಲ್ಲಿ ಒಳ್ಳೆಯ ಅವಕಾಶಗಳೂ ಇವೆ. ಅಲ್ಲಿಗೆ ಹೋಗಿ ನೆಲೆಸುವುದು ಅಶ್ಟು ಕಷ್ಟವೂ ಅಲ್ಲ. ಆದರೆ ನನಗೆ ಇದನ್ನು ಮಾಡಬೇಕು. ನನ್ನ ತಾಯ್ನೆಲಕ್ಕಾಗಿ ನಾನು ಹೋರಾಡಬೇಕು. ಯಾಕೆಂದ್ರೆ ನಾನು ಹಿಂದಿಗೆ ಹೋದ್ರು ಅಲ್ಲಿ ಯಾರೋ ಕನ್ನಡ ಸಿನೆಮಾವನ್ನು ಆಡಿಕೊಂಡರೆ ಅದು ನನ್ನನ್ನು ಚುಚ್ಚುತ್ತೆ, ಇದನ್ನು ಸರಿ ಮಾಡಲು ನನ್ನ ರಾಜ್ಯದಲ್ಲಿ ನಾನೇನು ಮಾಡಲಿಲ್ಲ ಅನ್ನುವ ಕೊರಗು ನನ್ನನ್ನು ಕಾಡುತ್ತೆ.

ಲೂಸಿಯಾ ಒಂದು ಚಿತ್ರವಷ್ಟೇ. ಒಂದಿನ ಬರುತ್ತೆ, ಕೆಲ ವಾರದಲ್ಲಿ ಹೋಗುತ್ತೆ. ಆದ್ರೆ ಪ್ರಾಜೆಕ್ಟ್ ಲೂಸಿಯಾ ಅನ್ನು ಕನಸು ಹಾಗಲ್ಲ. ಆಡಿಯನ್ಸ್ ಫಿಲ್ಮ್ಸ್ ಹಾಗಲ್ಲ. ಅವು ಎಂದಿಗೂ ಉಳಿಯುತ್ತವೆ. ಅದು ಹೊಸತೊಂದು ಆರಂಭಕ್ಕೆ ಮುನ್ನುಡಿ ಬರೆಯುತ್ತವೆ. ನಾವು ಅದರತ್ತ ಗಮನ ಕೊಡಬೇಕಿದೆಯೇ ಹೊರತು ಲೂಸಿಯಾ ಚಿತ್ರವೊಂದರ ಮೇಲಲ್ಲ

robbers-decampಸೋ, ನಮ್ಮ ಜೊತೆ ಕೆಂಪು ಮಾತ್ರೆ ತಗೊಳ್ಳೊಕೆ, ಎದ್ದೆಳೋಕೆ, ಒಂದು ಬದಲಾವಣೆಗೆ ಕೈ ಜೋಡಿಸೋಕೆ, ಇವತ್ತಿನ ರಿಯಾಲಿಟಿಯಲ್ಲಿ ಅದನ್ನು ಎದುರಿಸಿ ಬದುಕಲು ನೀವು ಸಿದ್ದರಾಗಿದ್ದರೆ ಬನ್ನಿ ಲೂಸಿಯಾ ಸಿನೆಮಾವನ್ನು ಪ್ರಿ-ಆರ್ಡರ್ ಮಾಡಿ ಒಬ್ಬ ಆನ್ ಲೈನ್ ವಿತರಕರಾಗಿ. ಕಣ್ಣು ಮುಚ್ಕೊಂಡು ಮಾಡಿ. ಪ್ರಿ ಆರ್ಡರ್ ಏನ್ ಮಾಡುತ್ತೆ ಅನ್ನೋದು ಅರ್ಥ ಆಗಲಿಲ್ಲ ಅಂದ್ರೆ ಅದನ್ನ ನಾವು ಆಮೇಲೆ ತಿಳಿಸಿ ಕೊಡ್ತಿವಿ, ನಮ್ಮ ಮೇಲೆ ನಂಬಿಕೆ ಇಡಿ. ಈಗಷ್ಟೇ ಆಚೆ ಊಟ ಮಾಡಿದೆ. 403ರೂಪಾಯಿ ಬಿಲ್ ಆಯ್ತು. ಲೂಸಿಯಾ ಪ್ರಿ-ಆರ್ಡರ್ ಮಾಡಲು ತಗಲೋದು ಬರೀ 500ರೂಪಾಯಿ. ಒಂದೊಳ್ಳೆ ಊಟ ಮಾಡ್ತಾ ಇದೀವಿ ಅಂದ್ಕೊಂಡು ಪ್ರಿ-ಆರ್ಡರ್ ಮಾಡಿ. ಈ ಸಣ್ಣ ತ್ಯಾಗ ತರುವ ದೊಡ್ಡ ಬದಲಾವಣೆಯ ಬಗ್ಗೆ ನಿಮ್ಮ ಮೇಲೆ ನಿಮಗೆ ಎಂದಿಗೂ ಹೆಮ್ಮೆ ಇರುತ್ತೆ.

ಕಳೆದ ವರ್ಷ 110 ಜನ ಕಣ್ ಮುಚ್ಕೊಂಡು ಲೂಸಿಯಾದಲ್ಲಿ ಹಣ ಹಾಕಿದಾಗ ಲೂಸಿಯಾ ಅಂದ್ರೆ ಏನು ಅಂತಲೂ ಅವರಿಗೆ ಗೊತ್ತಿರಲಿಲ್ಲ. ನಾವೊಂದು ಅಂತರ್-ರಾಷ್ಟ್ರೀಯ ಪ್ರಶಸ್ತಿ ಗೆಲ್ತೀವಿ ಅಂತ ಯಾರಿಗೂ ಕನಸೂ ಇರಲಿಲ್ಲ. ಬ್ರಿಟಿಶ್ ಕೌನ್ಸಿಲಿನ ಲಂಡನ್ ಕಚೇರಿಯಲ್ಲಿ ಹೊರ ದೇಶದ ಜನರೆದುರು ಕನ್ನಡ ಹಾಡೊಂದನ್ನು ಹಾಕ್ತೀವಿ ಅಂತಾನೂ ಯೋಚಿಸಿರಲಿಲ್ಲ.  ನಮ್ಮ ಸಿನೆಮಾದ ಹಾಡಾಗಲಿ, ಟ್ರೈಲರ್ ಆಗಲಿ ಈ ರೀತಿ ವೈರಲ್ ಆಗುತ್ತೆ ಅಂತ ಯಾರೂ ಕನಸಲ್ಲೂ ಅಂದುಕೊಂಡಿರಲಿಲ್ಲ. ಒಂದು ದೊಡ್ಡ ಬಜೆಟ್ಟಿನ ಸಿನೆಮಾವನ್ನ ಮೀರುವಂತೆ ಸುದ್ದಿ ಮಾಡ್ತೀವಿ ಅಂತಲೂ ಯಾರೂ ಅಂದುಕೊಂಡಿರಲಿಲ್ಲ. ಆದ್ರೆ ಇದೆಲ್ಲ ಆಯ್ತು ಮತ್ತು ಅದೆಲ್ಲ ಆಗಿದ್ದು ಕೆಂಪು ಮಾತ್ರೆ ಆಯ್ದುಕೊಳ್ಳುವ ಮೀಟರ್ ನಮ್ಮಲ್ಲಿದ್ದಿದ್ದರಿಂದ. ಈಗ ಓದುತ್ತಿರುವ ನಿಮ್ಮಲ್ಲೂ ಅದಿದೆಯೇ? ಬನ್ನಿ ಬದಲಾವಣೆಯ ತೇರೆಳೆಯಲು ಕೈ ಜೋಡಿಸಿ.

“ನಂಗೆ ನಿಂತುಕೊಳ್ಳಲು ಜಾಗ ಕೊಡಿ, ನಾನು ಜಗತ್ತನ್ನೇ ಅಲುಗಾಡಿಸುವೆ” ಎಂದಿದ್ದ ಆರ್ಕಿಮಿಡಿಸ್. “ನನಗೆ ಬೆಂಬಲ ಕೊಡಿ, ನಾನೊಂದು ಪಾಸಿಟಿವ್ ಆದ ಬದಲಾವಣೆ ತರುತ್ತೇವೆ” ಎಂದು ನಾನು ಹೇಳಬಯಸುವೆ.

 

ಪ್ರಿ-ಆರ್ಡರ್ ಮಾಡಲು ಮತ್ತು ಆನ್ ಲೈನ್ ಡಿಸ್ಟ್ರಿಬ್ಯೂಟರ್ ಆಗಲು ಇಲ್ಲಿ ಕ್ಲಿಕ್ ಮಾಡಿ